ಗ್ರೀನಿಜ್ -
	ಬೃಹದ್ ಲೊಂಡನಿಗೆ ಸೇರಿದ ಪುರಗಳಲ್ಲಿ (ಬರೊ) ಒಂದು. ಥೇಮ್ಸ್ ನದಿಯ ದಕ್ಷಿಣ ದಂಡೆಯ ಮೇಲಿದೆ. ಇದಕ್ಕೆ ಪೂರ್ವದಲ್ಲಿ ಬೆಕ್ಸ್ಲಿ, ದಕ್ಷಿಣದಲ್ಲಿ ಬ್ರಾಮ್ಲಿ. ಪಶ್ಚಿಮದಲ್ಲಿ ಲ್ಯೂಯಿಷೆಮ್ ಇವೆ. ಇದರ ವಿಸ್ತೀರ್ಣ 19 ಚ.ಮೈ. ಜನಸಂಖ್ಯೆ ಸು. 2.31.770 (1965). ಮೂರು ಪಾರ್ಲಿಮೆಂಟರಿ ಕ್ಷೇತ್ರಗಳಿಂದ ಕೂಡಿರುವ ಗ್ರಿನಿಜಿನಲ್ಲಿ ಚಾರಲ್ಟನ್, ಎಲ್‍ಥಾಮ್, ಪ್ಲಸ್ಟೆಡ್, ಕಿಡ್‍ಬ್ರೂಕ್ ಮತ್ತು ಬ್ಲಾಕ್‍ಹೀತ್ ಜಿಲ್ಲೆಗಳಿವೆ.

	ಗ್ರೀನಿಜ್ 1.750 ಎಕರೆಗಳ ತೆರೆದ ನೆಲದಿಂದ ಕೂಡಿದೆ. ಇದರ ದಕ್ಷಿಣ ತುದಿಯಲ್ಲಿ ಅನೇಕ ಆಧುನಿಕ ವಸತಿಗಳು ಬೆಳೆದಿವೆ. ಉತ್ತರದಲ್ಲಿ ಹಳೆಯ ಕಟ್ಟಡಗಳಿಂದಾಚೆ ಕೈಗಾರಿಕಾ ಪ್ರದೇಶವುಂಟು. ಥೇಮ್ಸಿನ ಉತ್ತರ ದಂಡೆಯ ಪ್ರದೇಶಕ್ಕೆ ಗ್ರೀನಿಜಿನಿಂದ ಸುರಂಗ ಮಾರ್ಗಗಳೂ ದೋಣಿ ಸಂಪರ್ಕವೂ ಉಂಟು. ಗ್ರೀನಿಜ್ ಬ್ರಿಟಿಷ್ ರೈಲ್ವೆಯ ವ್ಯವಸ್ಥೆಗೆ ಒಳಪಟ್ಟಿದೆ.

	ಗ್ರೀನಿಜಿನ ಪ್ಯಾರಿಷ್ ಚರ್ಚ್ 1718ರಷ್ಟು ಹಿಂದಿನದು. ಎರಡನೆಯ ಮಹಾಯುದ್ಧದಲ್ಲಿ ಈ ಕಟ್ಟಡಕ್ಕೆ ಹಾನಿ ಉಂಟಾಗಿತ್ತು. ಇದನ್ನು ಪೂರ್ವಸ್ಥಿತಿಗೆ ತರಲಾಗಿದೆ. ಗ್ರೀನಿಜಿನ ಮುಖ್ಯ ಕಟ್ಟಡಗಳು ಗ್ರೀನಿಜ್ ಉದ್ಯಾನದಲ್ಲೂ ಅದರ ಸುತ್ತಲೂ ನಿರ್ಮಿತವಾಗಿವೆ. ಉದ್ಯಾನದ ವಿಸ್ತೀರ್ಣ 196.5 ಎಕರೆಗಳು. ಗ್ಲಾಸೆಸ್ಟರಿನ ಡ್ಯೂಕ್ ಉದ್ಯಾನಕ್ಕೆ ಆವರಣ ನಿರ್ಮಿಸಿ, ಒಂದು ಗುಡ್ಡದ ಮೇಲೆ ವೀಕ್ಷಣಾ ಗೋಪುರವೊಂದನ್ನು ನಿರ್ಮಿಸಿದ. ಇದು ಮುಂದೆ ರಾಯಲ್ ಖಗೋಳ ವೀಕ್ಷಣಾಲಯವಾಯಿತು. ಅನಂತರ ನದೀದಡದಲ್ಲಿ ಪ್ಲಾಸೆನ್ಷಿಯ ಎಂಬ ಕಟ್ಟಡದ ನಿರ್ಮಾಣವಾಯಿತು. ಟ್ಯೂಡರ್ ದೊರೆಗಳು ಇದನ್ನು ವಿಸ್ತರಿಸಿ ತಮ್ಮ ಅರಮನೆಯಾಗಿ ಮಾಡಿಕೊಂಡರು. ಎಂಟನೆಯ ಹೆನ್ರಿ ಹುಟ್ಟಿದ್ದೂ ಮೂರು ಪತ್ನಿಯರನ್ನು ಮದುವೆಯಾದ್ದೂ ಅಲ್ಲಿ. 1694ರಲ್ಲಿ ಇದನ್ನು ನೌಕಾ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು. 1973ರಲ್ಲಿ ಅಲ್ಲಿಗೆ ನೌಕಾ ಕಾಲೇಜು ಬಂತು. ಕ್ವೀನ್ಸ್ ಹೌಸ್ 1637ರಲ್ಲಿ ನಿರ್ಮಿತವಾಯಿತು. 1806ರಲ್ಲಿ ಇದನ್ನು ನೌಕಾಶಾಲೆಯನ್ನಾಗಿ ಪರಿವರ್ತಿಸಲಾಯಿತು. 1937ರಲ್ಲಿ ಇದು ರಾಷ್ಟ್ರೀಯ ಸಮುದ್ರ ವಸ್ತುಸಂಗ್ರಹಾಲಯವಾಯಿತು. ಪ್ರಪಂಚದ ಎಲ್ಲ ದೇಶಗಳೂ ರೇಖಾಂಶವನ್ನು ಗ್ರೀನಿಜಿನಿಂದಲೇ ಎಣಿಸುತ್ತವೆ. ಈ ಪದ್ಧತಿ ಆರಂಭವಾದ್ದು 1884ರಲ್ಲಿ. ರಾಯಲ್ ಖಗೋಳ ವೀಕ್ಷಣಾಲಯವನ್ನು 1958ರಲ್ಲಿ ಇಲ್ಲಿಂದ ಹಟ್ರ್ಸ್‍ಮನ್‍ಸ್ಯೂಗೆ ವರ್ಗಾಯಿಸಲಾಯಿತಾದರೂ ರೇಖಾಂಶ ಎಣಿಕೆ ಮಾತ್ರ ಈಗಲೂ ಇಲ್ಲಿಂದಲೇ ಆರಂಭವಾಗುತ್ತದೆ (ನೋಡಿ- ಗ್ರೀನಿಜ್-ಮಾಧ್ಯ-ಕಾಲ). ಈಗ ಗ್ರೀನಿಜ್‍ನ ಭಾಗವಾಗಿರುವ ವುಲ್ವಿಜ್ ಕೂಡ ಹಳೆಯ ಗ್ರೀನಿಜಿನಂತೆ ಟ್ಯೂಡರ್ ದೊರೆಗಳ ಕಾಲದಲ್ಲಿ ಅಭಿವೃದ್ಧಿ ಹೊಂದಿತು. ಇಲ್ಲಿ ನೌಕಾಕೇಂದ್ರಗಳೂ ಹಡಗು ತಯಾರಿಕಾ ಕೇಂದ್ರಗಳೂ ಸ್ಥಾಪಿತವಾದುವು. 1741ರಲ್ಲಿ ವಾರನ್‍ನಲ್ಲಿ ಸ್ಥಾಪಿತವಾದ ರಾಯಲ್ ಮಿಲಿಟರಿ ಅಕಾಡಮಿ 1806ರಲ್ಲಿ ವುಲ್‍ವಿಜ್‍ಗೆ ವರ್ಗವಾಯಿತು. ಇಲ್ಲಿಯ ರೊಟಂಡ ವಸ್ತುಸಂಗ್ರಹಾಲದಲ್ಲಿ ಅಸ್ತ್ರಗಳೂ ಹಡಗುಗಳ ನಮೂನೆಗಳೂ ಇದೆ. ಗ್ರೀನಿಜ್ ಹಡಗುಕಟ್ಟೆಯಲ್ಲಿ ಒಣನೆಲದ ಮೇಲೆ ಕಟಿ ಸಾರ್ಕ್ ಎಂಬ ಹಳೆಯ ಹಾಯಿ ಹಡಗೊಂದನ್ನು ಆ ಕಾಲದ ಹಡಗುಗಳ ಸ್ಮಾರಕವಾಗಿ ಇಡಲಾಗಿದೆ. ಗ್ರೀನಿಜಿನಲ್ಲಿ ಪುರಾತನ ಭವನಗಳೂ ಸ್ಮಾರಕಗಳೂ ಹಲವಾರು ಉಂಟು.
(ಎಂಎಎಚ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ